ಟಿಬೆಟೋ - ಬರ್ಮೀ ಭಾಷೆಗಳು

ಟಿಬೆಟೋ-ಚೀನೀ ಭಾಷಾವರ್ಗದ ಮೂರು ಗುಂಪುಗಳಲ್ಲಿ ಒಂದಕ್ಕೆ ಸೇರಿದವು. ಬರ್ಮ, ಟಿಬೆಟ್ ಮತ್ತು ಆ ದೇಶಗಳಿಗೆ ಹತ್ತಿಕೊಂಡಿರುವ ಭಾರತದ ಪ್ರದೇಶದಲ್ಲಿ ಇವನ್ನು ಕಾಣಬಹುದಲ್ಲದೆ ಈ ಗುಂಪಿನ ಭಾಷೆಯನ್ನಾಡುವವರು ಬಹುತೇಕ ಮಂಗೋಲ ಜನಾಂಗಕ್ಕೆ ಸೇರಿದವರು. ಈ ಗುಂಪಿಗೆ ಸೇರಿದ ಭಾಷೆಗಳಿಗೆಲ್ಲ ಸಾಧಾರಣವಾದ ಲಕ್ಷಣಗಳಿವೆ. ಪ್ರಮುಖ ಲಕ್ಷಣಗಳೆಂದರೆ-ಏಕಾಕ್ಷರ ಶಬ್ದಗಳ ಪ್ರಾಚುರ್ಯ, ಪದ ನಿಷ್ಪತ್ತಿಯಲ್ಲಿ ಸ್ಥಿರವಾದ ವ್ಯವಸ್ಥೆ ಇಲ್ಲದಿರುವುದು. ಏಕಾಕ್ಷರ ಶಬ್ದಗಳು ಬಹ್ವಕ್ಷರ ಶಬ್ದಗಳಿಂದಲೇ ನಿಷ್ಪನ್ನವಾದವುಗಳೆಂದು ನಿರ್ವಿವಾದವಾಗಿ ಸಿದ್ಧಪಟ್ಟಿದ್ದರೂ ಈ ವರ್ಗದ ಭಾಷೆಗಳು ಸಂಶ್ಲಿಷ್ಟ ಭಾಷೆಗಳೆಂದೇ ಪರಿಗಣಿತವಾಗುತ್ತಿವೆ. ಇದು ಇಂಡೊ-ಚೀನಿ ಭಾಷಾವರ್ಗದ ಮೂಲವನ್ನೇ ಪ್ರಶ್ನಿಸಿ ಎರಡು ಭಿನ್ನವಾದ ಭಾಷಾವರ್ಗವನ್ನು ಮುಂದೆ ಮಾಡಿತು: 1 ಮೋನ್‍ಖ್ಮೇರ್ ವರ್ಗ ಮತ್ತು 2 ಚೀನೀ, ಥಾಯಿ ಟಿಬೆಟೋ-ಬರ್ಮೀ ಉಪವರ್ಗಗಳಿಂದ ಕೂಡಿದ ಇನ್ನೊಂದು ವರ್ಗ. ಟಿಬೆಟೋ-ಚೀನೀ ವರ್ಗಕ್ಕೆ ಸೇರಿದವೆಂದು ಪ್ರಾರಂಭದಲ್ಲಿ ಯಾವ ಭಾಷೆಗಳನ್ನು ವರ್ಣಿಸುತ್ತಿದ್ದರೋ ಆ ಭಾಷೆಗಳು ಈಗ ಟಿಬೆಟೋ-ಬರ್ಮೀ ವರ್ಗಕ್ಕೆ ಸೇರಿದವೆಂದು ತಿಳಿಯಲಾಗುತ್ತಿದೆ. ಟಿಬೆಟೋ-ಬರ್ಮೀ ಭಾಷಾವರ್ಗದಲ್ಲಿ ಮರ್ಮಿ, ಮಗರಿ, ಲೆಪ್‍ಚಾ, ಅಬೋರ್, ಮಿರಿ, ದಫ್ಲಾ, ಮಿಕಿರ್, ನಾಗಾ, ಲುಶಾಯಿ ಮೊದಲಾದವು ಸಮಾವೇಶಗೊಳ್ಳುತ್ತವೆ.

ಟಿಬೆಟೋ-ಬರ್ಮೀ ಭಾಷಾವರ್ಗದಲ್ಲಿ ಅನೇಕ ಭಾಷೆಗಳೂ ಉಪಭಾಷೆಗಳೂ ಸಮಾವೇಶಗೊಳ್ಳುತ್ತವೆಯೆಂದು ಮೇಲೆ ಸೂಚಿಸಲಾಗಿದೆ. ಈ ಭಾಷೆಗಳು ಪ್ರಚಾರದಲ್ಲಿರುವ ಕ್ಷೇತ್ರ ಉತ್ತರದ ಟಿಬೆಟಿನಿಂದ ದಕ್ಷಿಣದ ಬರ್ಮದವರೆಗೂ ಪಶ್ಚಿಮದ ಬಲ್ತಿಸ್ತಾನದಿಂದ ಪೂರ್ವದ ಯೂನಾನ್‍ವರೆಗೂ ಹರಡಿಕೊಂಡಿವೆ.

ಟಿಬೆಟೋ-ಬರ್ಮೀ ಉಪವರ್ಗ ಈ ಜ್ಞಾತಿಭಾಷೆಗಳನ್ನೊಳಗೊಂಡಿದೆ: 1 ಟಿಬೆಟನ್ ಭಾಷೆಗಳು ಮತ್ತು ಉಪಭಾಷೆಗಳು, 2 ಹಿಮಾಲಯದ ಭಾಷೆಗಳು ಮತ್ತು ಉಪಭಾಷೆಗಳು, 3 ಉತ್ತರ ಅಸ್ಸಾಮಿನ ಭಾಷೆಗಳು ಮತ್ತು ಉಪಭಾಷೆಗಳು, 4 ಬೋಡೋ ಭಾಷೆಗಳು ಮತ್ತು ಉಪಭಾಷೆಗಳು, 5 ನಾಗಾಭಾಷೆಗಳು ಮತ್ತು ಉಪಭಾಷೆಗಳು, 6 ಕಚಿನ್ ಭಾಷೆಗಳು ಮತ್ತು ಉಪಭಾಷೆಗಳು, 7 ಕುಕಿಚಿನ್ ಭಾಷೆಗಳು ಮತ್ತು ಉಪಭಾಷೆಗಳು, 8 ಬರ್ಮೀ ಭಾಷೆಗಳು ಮತ್ತು ಉಪಭಾಷೆಗಳು.

ಈ ಎಲ್ಲ ಭಾಷೆಗಳೂ ಉಪಭಾಷೆಗಳೂ ಸಯಾಮೀ-ಚೀನೀ ಭಾಷಾವರ್ಗಕ್ಕೆ ನಿಕಟಸಂಬಂಧಿಗಳಾಗಿವೆ. ಟಿಬೆಟನ್, ಬರ್ಮೀ ಖಾಮ್ತಿ (ಥಾಯ್ ಉಪವರ್ಗ) ಮತ್ತು ಚೀನೀ ಭಾಷೆಗಳಲ್ಲಿನ ಶಬ್ದಗಳನ್ನು ಪರೀಕ್ಷಿಸಿದರೆ ಅವು ನಿಕಟವರ್ತಿಯಾಗಿರುವುದು ಕಂಡುಬರುತ್ತದೆ. ಟಿಬೆಟನ್, ಚೀನೀ ಹಾಗೂ ಸಯಾಮೀ ಭಾಷೆಗಳು ಉಚ್ಚ ನೀಚ ಮೊದಲಾದ ವಿವಿಧ ಪ್ರಕಾರದ ಶ್ರುತಿವಿನ್ಯಾಸಗಳನ್ನು ಪಡೆದಿವೆ. ಟಿಬೆಟೋ-ಬರ್ಮನ್ ಮತ್ತು ಸಯಾಮಿ-ಚೀನೀ ಭಾಷಾವರ್ಗಗಳ ಧ್ವನಿವ್ಯವಸ್ಥೆ ಒಂದೇ ಆಗಿರಬಹುದೆಂದು ಊಹಿಸಲು ಸಾಧ್ಯವಾಗಿದೆ. ಉದಾಹರಣೆಗೆ-ಅಕರ್ಮಕ ಪ್ರಕೃತಿಗಳು ಕರ್ಕಶ ವರ್ಗದಿಂದಲ್ಲ, ಮೃದುವರ್ಣದಿಂದಲೇ ಪ್ರಾರಂಭವಾಗುತ್ತವೆ. ಎಲ್ಲ ಭಾಷೆ ಉಪಭಾಷೆಗಳಲ್ಲೂ ಪದಾದಿಯ ಮೃದುವರ್ಣಗಳು ಕರ್ಕಶ ವರ್ಣಗಳಾಗಿ ಪರಿವರ್ತನೆಯಾಗುವ ಪ್ರವೃತ್ತಿಯನ್ನು ತೋರುತ್ತವೆ. ಅದೇ ಪ್ರಕಾರ ಅಕರ್ಮಕ ಧಾತುಗಳ ಆದಿ ಮೃದು ವ್ಯಂಜನವನ್ನು ಕರ್ಕಶವನ್ನಾಗಿ ಮಾಡುವುದರಿಂದ ಆ ಧಾತುಗಳು ಸಕರ್ಮಕಗಳಾಗಿ ಪರಿವರ್ತನೆಗೊಳ್ಳುತ್ತವೆ. ಹಾಗಾಗುವಾಗ ಆ ಪದಗಳು ಉಚ್ಚಶ್ರುತಿಯನ್ನು ಪಡೆಯುತ್ತವೆ. ಈ ಎರಡೂ ಪ್ರಕ್ರಿಯೆಗಳು ಅಲ್ಲೊಂದು ಉಪಸರ್ಗವಿದ್ದಿರಬೇಕೆಂಬುದನ್ನು ಸೂಚಿಸುತ್ತವೆ. ಚೀನೀ ಭಾಷೆಯಲ್ಲಿ ಈ ಉಪಸರ್ಗಗಳು ಲುಪ್ತವಾಗಿವೆ. ಆದರೆ ಶ್ರುತಿವಿನ್ಯಾಸ ಅಲ್ಲೊಂದು ಉಪವರ್ಗವಿತ್ತೆಂದು ತೋರುತ್ತದೆ. ಯಾವ ಮೂಲ ಭಾಷೆಯಿಂದ ಇಂದಿನ ಟಿಬೆಟೋ-ಬರ್ಮೀ ಮತ್ತು ಸಯಾಮೀ-ಚೀನೀ ಭಾಷಾವರ್ಗಗಳು ಇಳಿದು ಬಂದುವೋ ಅಲ್ಲಿಯ ಉಪಸರ್ಗಗಳ ಈ ಸಾಮಾನ್ಯವಾದ ಬಳಕೆ ಈ ವರ್ಗವು ಮೂಲಭೂತವಾಗಿ ಸಂಶ್ಲಿಷ್ಟಪ್ರಕಾರದ ವರ್ಗಕ್ಕೆ ಸೇರಿದುದೆಂಬುದನ್ನು ಖಚಿತ ಪಡಿಸುತ್ತದೆ.

ಹಿಂದೆಯೇ ಲಕ್ಷಣಿಸಿದಂತೆ ಈ ಭಾಷೆಗಳು ಏಕಾಕ್ಷರೀಯ ಶಬ್ದಗಳನ್ನೊಳಗೊಂಡಿವೆಯಲ್ಲದೆ ಅವುಗಳಲ್ಲಿ ಸಾಮಾನ್ಯವಾಗಿ ಶಬ್ದರೂಪಗಳ ಅಭಾವ ತೋರಿ ಬರುತ್ತದೆ. ಆದರೂ ಈ ಲಕ್ಷಣಗಳು ಇವಕ್ಕೇ ಮೊಟ್ಟಮೊದಲು ರೂಪುಗೊಂಡವಲ್ಲ. ಆದರೆ ಈ ಭಾಷೆಗಳಲ್ಲಿ ಅವನ್ನು ಪ್ರಮುಖವಾಗಿ ಇಂದು ಕಾಣುತ್ತೇವೆ ಎಂಬುದೂ ನಿಜ.

ಈ ಭಾಷೆಗಳಲ್ಲಿನ ವಾಕ್ಯಸ್ವರೂಪ ಸಂಬಂಧವಿಲ್ಲದ ಬದಲಾವಣೆಗೊಳಗಾಗದ ಮೂಲರೂಪಗಳನ್ನು ಸಾಲಾಗಿ ಜೋಡಿಸಿಟ್ಟಂತೆ ಇರುತ್ತದೆ. ಆದರೂ ಟಿಬೆಟೋ-ಬರ್ಮೀ ಭಾಷೆಗಳ ವಾಕ್ಯಗಳಲ್ಲಿ ಕರ್ತೃ ಕರ್ಮ ಕ್ರಿಯಾಪದಗಳ ವ್ಯವಸ್ಥೆಕಂಡು ಬರುತ್ತದೆ. ಅಲ್ಲದೆ ವಾಕ್ಯಗಳಲ್ಲಿ ಪರಸ್ಪರ ಸಂಬಂಧವನ್ನು ವಿವರಿಸಲು ಸಹಾಯಕ ಪದಗಳ ಬಳಕೆ ಪ್ರಚುರವಾಗಿದೆ. 

ಟಿಬೆಟೋ-ಬರ್ಮೀ ಭಾಷೆಗಳ ಇನ್ನೂ ಕೆಲವು ಲಕ್ಷಣಗಳನ್ನು ಇಲ್ಲಿ ಸಂಗ್ರಹಿಸಬಹುದು; ಟಿಬೆಟೋ ಬರ್ಮೀಗೆ, ಅದೇಕೆ, ಇಂಡೋ-ಚೀನೀಭಾಷಾವರ್ಗಕ್ಕೇ ಸಮೃದ್ಧ, ವೈವಿಧ್ಯಪೂರ್ಣ ಶಬ್ದಭಂಡಾರವಿದೆ. ಟಿಬೆಟೋ-ಬರ್ಮೀ ವರ್ಗದ ಅನೇಕ ಭಾಷೆಗಳಲ್ಲಿ ಭಾವಸೂಚೀ ಪದಗಳ ಅಭಾವವಿದೆ. ಆದರೆ ಪ್ರತಿಯೊಂದು ವಸ್ತು. ಕಲ್ಪನೆಗೂ ಬೇರೆ ಬೇರೆ ಶಬ್ದಗಳಿವೆ. ಟಿಬೆಟೋ-ಬರ್ಮೀ ಭಾಷೆಗಳ ಇತಿಹಾಸ ತೋರುವಂತೆ ಇಂದು ಆ ಭಾಷೆಯಲ್ಲಿ ಪ್ರತ್ಯಯ ಶಬ್ದಗಳು ಬೆಳೆದು ಬರಹತ್ತಿವೆಯಾದರೂ ಅವೆಲ್ಲ ನಿಪಾತಗಳಂತೆಯೇ ಇವೆ. ವಸ್ತುಗಳ ಸಾಧಾರಣ ರೂಪಗಳಿಲ್ಲದೇ ಇರುವುದಕ್ಕೆ ಉದಾಹರಣೆಯಾಗಿ ಇಂದಿನ ಅನೇಕ ಟಿಬೆಟೋ-ಬರ್ಮೀ ಭಾಷೆಗಳಲ್ಲಿ ಕೈ, ಕಾಲು, ತಂದೆ, ತಾಯಿ, ಮೊದಲಾದ ಶಬ್ದಗಳಿಗೆ ಪದಗಳೇ ಇಲ್ಲದಿರುವುದನ್ನು ಗಮನಿಸಬೇಕು. ಆದರೆ ಅಲ್ಲಿ ನನ್ನ ಕೈ, ನಿನ್ನ ಕೈ, ಅವನ ಕೈ ಮೊದಲಾದವುಗಳಿಂದಲೇ ವಸ್ತುನಿರ್ದೇಶ ಮಾಡುತ್ತಾರೆ. ಆ ಪ್ರಕಾರ ಮಣಿ ಪುರಿಯಲ್ಲಿ  ಇ ಪಾ=ನನ್ನ ತಂದೆ, ಇ ಮಾ=ನನ್ನ ತಾಯಿ ಮಾಖ್‍ಉತ್=ನನ್ನ ಕೈ, ನಿಖ್ ಓಙ=ನಿನ್ನ ಕಾಲು. ಆದರೆ ಪಾ=ತಂದೆ, ಮಾ=ತಾಯಿ ಎಂಬ ಪದಗಳಿಲ್ಲ. ಈ ಭಾಷೆಗಳ ವ್ಯಾಕರಣದಲ್ಲಿ ಲಿಂಗವಿವಕ್ಷೆ ಇಲ್ಲ. ಆದರೆ ಪದಗಳಲ್ಲಿ ಸಜೀವ ವಸ್ತುಗಳು ಗಂಡು ಹೆಣ್ಣು ವಿಭೇದವನ್ನು ಅರ್ಥದ ದೃಷ್ಟಿಯಿಂದ ಗುರುತಿಸಲಾಗುತ್ತಿದೆ. ಬಹುತೇಕ, ಗಂಡು ಹೆಣ್ಣುಗಳನ್ನು ಸೂಚಿಸಲು ಪ್ರತ್ಯೇಕ ಶಬ್ದಗಳೇ ಇರುತ್ತವೆ. ಈ ಭಾಷೆಗಳಲ್ಲಿ ಸರಿಯಾದ ನಾಮಪದ ನಿಷ್ಪತ್ತಿಯೂ ಕಂಡುಬರುತ್ತಿಲ್ಲ. ಹಾಗೆಯೇ ವಿಶೇಷಣಗಳನ್ನು ನಾಮಪದಗಳಿಂದ ಬೇರ್ಪಡಿಸುವುದೂ ಅಸಾಧ್ಯ. ನಾಮಗಳೂ ವಿಶೇಷಣಗಳೂ ಒಂದು ರೀತಿಯ ಸಮಸ್ತಪದವನ್ನುಂಟುಮಾಡುತ್ತದೆ. ಪ್ರತ್ಯಯಗಳನ್ನು ಕೊನೆಯ ರೂಪಕ್ಕೆ ಸೇರಿಸಲಾಗುತ್ತವೆ. ಇದು ಟಿಬೆಟೋ-ಬರ್ಮೀ ಭಾಷೆಗಳ ಮೂಲ ಲಕ್ಷಣದ ಪರಿಣಾಮವೆಂದು ಹೇಳಬಹುದು. ಈ ಭಾಷೆಗಳಲ್ಲಿ ಪದರೂಪ ನಿಷ್ಪತ್ತಿಯಿಲ್ಲ. ಕಾಲ, ಅರ್ಥದಲ್ಲಿ ಸೂಚಿಸಬೇಕಾದ ವಿವಿಧ ಸಂಬಂಧಗಳನ್ನು ಅನೇಕ ಸಮಾನ ಶಬ್ದಗಳಿಂದ ಸೂಚಿಸಲಾಗುತ್ತ್ತದೆ. ಸಂಖ್ಯಾಕ್ರಮ ದಶಮಾನ ಪದ್ಧತಿಯಲ್ಲೇ ಇದೆ. ಟಿಬೆಟೋ-ಬರ್ಮೀಯಲ್ಲಿ ಕಾಣಬಹುದಾದ ಧಾತುಗಳೆಲ್ಲ ನಾಮಗಳೇ. ಅಂದರೆ ಈ ಭಾಷೆಗಳಲ್ಲಿ ಧಾತುಗಳೇ ಇಲ್ಲವೆಂದು ಹೇಳಬಹುದು.											(ಐ.ಎಸ್.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ